ಬನಾಸ್ ಕಂಠಾ- 
	ಭಾರತದ ಗುಜರಾತ್ ರಾಜ್ಯದ ಅತ್ಯಂತ ಉತ್ತರದ ಒಂದು ಜಿಲ್ಲೆ. ಇದಕ್ಕೆ ಈ ಹೆಸರು ಬಂದದ್ದು ಈ ಜಿಲ್ಲೆಯನ್ನು ಹಾದು ಹೋಗುವ ಬನಾಸ್ ನದಿಯಿಂದ. ಭಾರತ ಸ್ವಾತಂತ್ರ್ಯ ಪಡೆದ ತರುವಾಯ, 1949-50ರಲ್ಲಿ,. ಕೆಲವು ಸಣ್ಣ ಮುಸ್ಲಿಂ ಹಾಗೂ ರಜಪೂತ್ ಸಂಸ್ಥಾನಗಳನ್ನೂ, ಜಾಗೀರುಗಳನ್ನೂ ಸೇರಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 12,702 ಚ.ಕಿಮೀ ಜನಸಂಖ್ಯೆ 1,667,914 (1981). ಕಛ್ ನಿಂದ ಪೂರ್ವದ ಆರಾವಲಿ ಪರ್ವತ ಶ್ರೇಣಿಯ ವರಗೆ ವಿಸ್ತರಿಸಿದ ಬನಾಸ್ ಕಂಠಾದ ಉತ್ತರದಲ್ಲಿ ರಾಜಸ್ಥಾನ ರಾಜ್ಯವಿದೆ. ಥಾರ್ ಮರುಭೂಮಿಯ ದಕ್ಷಿಣ ಅಂಚಿನಲ್ಲಿ ಇರುವ ಈ ಜಿಲ್ಲೆಯ ಬಹುಭಾಗ ಮರಳಿನಿಂದ ಕೂಡಿದ ಸಮತಲ ಪ್ರದೇಶ. ಜಿಲ್ಲೆಯ ಆರನೆಯ ಒಂದು ಭಾಗದಷ್ಟು ನೆಲ ಬಂಜರು. ಕೆಲವು ಭಾಗಗಳಲ್ಲಿ ದಟ್ಟವಾದ ಅರಣ್ಯಗಳೂ ಇನ್ನು ಕೆಲವು ಭಾಗಗಳಲ್ಲಿ ಹುಲ್ಲುಗಾವಲುಗಳೂ ಇವೆ, ರಾಗಿ ಮತ್ತು ಗೋದಿ ಇಲ್ಲಿಯ ಪ್ರಮುಖ ಬೆಳೆಗಳು, ಮುಸುಕಿನ ಜೋಳ, ಆಲೂಗಡ್ಡೆ, ಮೋಪು, ಮರಮುಟ್ಟುಗಳು ಮತ್ತು ಕೈಮಗ್ಗದ ಬಟ್ಟೆ ಮುಖ್ಯ ರಫ್ತುವಸ್ತುಗಳು. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಉತ್ತಮ ಶಿಲೆಗಳು ಸಿಗುವ ಕಲ್ಲುಗಣಿಗಳು ಈ ಜಿಲ್ಲೆಯಲ್ಲಿವೆ. ಜಿಲ್ಲೆಯ ಸಂಚಾರಮಾರ್ಗಗಳು ಉತ್ತಮವಾಗಿಲ್ಲದಿರುವುದರಿಂದ ಸಾರಿಗೆ ವ್ಯವಸ್ಥೆ ಅಷ್ಟೇನೂ ಚೆನ್ನಾಗಿಲ್ಲ. ಆದರೆ ಜಿಲ್ಲೆಯ ಆಡಳಿತ ಕೇಂದ್ರವಾದ ಪಾಲನಪುರ (61,212) ಮತ್ತು ಇತರ ಕೆಲವು ಪಟ್ಟಣಗಳು ಪಶ್ಚಿಮ ರೈಲ್ವೆ ಮಾರ್ಗದ ಮೇಲಿವೆ. ಪಾಲನಪುರ ಈ ಜಿಲ್ಲೆಯ ಪ್ರಮುಖ ವ್ಯಾಪಾರಸ್ಥಳವಾಗಿದೆ. ಇದೊಂದು ಪ್ರಾಚೀನ ಪಟ್ಟಣ. ಇದು ಚಾವಡ ರಾಜಮನೆತನದ ಸ್ಥಾಪಕನಾದ ವನರಾಜನ (746) ರಾಜಧಾನಿಯಾಗಿತ್ತೆಂದು ಹೇಳಲಾಗಿದೆ. 
(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ